ಕುದಿ ಎಸರು (ಆತ್ಮಕತೆ ಭಾಗ 1)
ಕುದಿ ಎಸರು (ಆತ್ಮಕತೆ ಭಾಗ 1)
ಕುದಿ ಎಸರು (ಆತ್ಮಕತೆ ಭಾಗ 1)
Share:
₹270
Ships within 3 days
SKU :
100
Description

ಲೇಖಕರು: ಡಾ. ವಿಜಯಾ ಬೆಲೆ:300/- ರಿಯಾಯಿತಿ: 10% ಪ್ರಕಾಶನ: ನಾಕುತಂತಿ ಪ್ರಕಾಶನ .................. ಅಮ್ಮನ ಪುಸ್ತಕ ಓದಿದೆ. ನಾನು ಇಷ್ಟು ತಡವಾಗಿ ಓದಿದ್ದಕ್ಕೆ ನನ್ನ ಮೇಲೆ ನನಗೇ ಬೇಜಾರಾಯಿತು. ಅಪ್ಪ ಮತ್ತು ಅಮ್ಮ ಪುಸ್ತಕ ಬಿಡುಗಡೆಯಾದಾಗಲೇ ಮನೆಗೆ ತಂದು ಓದಿ ಚೆನ್ನಾಗಿದೆ ಎಂದು ತಿಳಿಸಿದ್ದು ಈಗ ನೆನಪಿಗೆ ಬಂತು. ನನ್ನ ಮನೆಯಲ್ಲಿ ನಾನು ನೋಡಿದ ಅತ್ಯಂತ ಗಟ್ಟಿ ಮತ್ತು ಶೋಚನೀಯ ಬದುಕು ಎರಡೂ ಕಂಡಿದ್ದು ನನ್ನ ತಾತನ ತಂಗಿ ಜಾನಕಮ್ಮನರಲ್ಲಿ.

ಅವರಿಗೆ ೧೩ ವರ್ಷಕ್ಕೆ ಮದುವೆ, ಮಗು ಮತ್ತು ವೈಧವ್ಯ ಎಂಬ ಟ್ರಿಪಲ್ ಧಮಾಕಾ ಜೀವನ ಪರಿಪಾಲಿಸಿತ್ತು. ಗಂಡನ ಮನೆಯವರು ಹಾಲ್ದೋಡ್ಡೇರಿ ಎಂಬ ಉದ್ಧಾರವಾಗದ ಹಳ್ಳಿಯಲ್ಲಿ ತಲೆ ಬೋಳಿಸಿ ಮಡಿ ಮಾಡುವ ಹುನ್ನಾರ ಮಾಡಿದ್ದರು. ತಾತ ಅದನ್ನ ವಿರೋಧಿಸಿ ಆಕೆಯನ್ನ ಮತ್ತೆ ಶಾಲೆಗೆ ಸೇರಿಸಿದ್ದರು. ಈ ಸಂಭ್ರಮಕ್ಕೆ ತಾತನ್ನನ್ನ ಹಾಲ್ದೊಡ್ಡೇರಿ ಬಹಿಷ್ಕಾರ ಹಾಕಿತ್ತು. ಮತ್ತೆ ಎಂದೂ ಊರಿಗೆ ಕಾಲಿಡದ ತಾತ ದೊಡ್ಡ ಮನುಷ್ಯರಾಗಿ ಬಾಳಿದ್ದರು. ಆದರೆ ನನಗೆ ಜಾನೂ ಅಜ್ಜಿಯ ಬದುಕು ಇವೆಲ್ಲವನ್ನು ಸಹಿಸಿಕೊಂಡು ಹೇಗಿತ್ತು ಎಂಬುದು ಗೊತ್ತೇ ಇರಲ್ಲಿಲ್ಲ. ಆಗಿನ ಕಾಲದಲ್ಲಿ ಅತೀ ಮಡಿವಂತಿಕೆಯ ಜನರ ಮಧ್ಯೆ ಮಗುವಿರುವ ವಿಧವೆಯನ್ನ ಏನೇನೆಲ್ಲಾ ಅಂದಿರಬಹುದು ಎಂಬ ವಿಚಾರ ನನ್ನ ತಲೆಗೆ ಹೊಳೆದಿದ್ದೇ ಈ ಪುಸ್ತಕ ಓದಿ.

ಮೊದಲ ಒಂದಷ್ಟು ಪುಟಗಳನ್ನ ಓದಿದರೆ ಕಣ್ಣು ಒದ್ದೆಯಾಗುತ್ತದೆ. ೧೬ ವರ್ಷಕ್ಕೆ ಮದುವೆ ಎಂದರೆ ಅದೇನು ಮಕ್ಕಳಾಟವೇ. ೧೬ ವರ್ಷಕ್ಕೆ ನಾನು ನ್ಯಾಷನಲ್ ಕಾಲೇಜು ಬಿಟ್ಟು ಇನ್ನೆಲ್ಲೂ ಓದಲ್ಲ ಎಂದು ಹಠ ಮಾಡಿದ್ದಷ್ಟೆ ನೆನಪು. ಯಾರಾದರೂ ಹುಡುಗ ನನ್ನ ಕೈ ಮುಟ್ಟಿದರೆ ಮಕ್ಕಳಾಗಿಬಿಡುತ್ತದೆ ಎಂದು ಅರಿತುಕೊಂಡಿದ್ದ ವಯಸ್ಸು. ಇಲ್ಲಿ ಈ ಪುಸ್ತಕದಲ್ಲಿ ಹುಡುಗಿಯ ಮೈ ಮೇಲೆ ಗಂಡ ಅಥವಾ ಗಂಡು ಎನಿಸಿಕೊಂಡವನು ಮಾಡುವ ಚೇಷ್ಟೆ, ನೀಲಿ ಚಿತ್ರಗಳನ್ನ ನೋಡಿ ನೋಡಿ ಅಲ್ಲಿ ಕಾಣುವ ನಟಿಗೂ ಹೆಂಡತಿಗೂ ವ್ಯತ್ಯಾಸವೇ ಇಲ್ಲದೇ ಬಳಸಿಕೊಳ್ಳುವ ರೀತಿ ನನ್ನನ್ನ ದಂಗು ಬಡಿಸಿತು. ಇದೇ ಸಮಸ್ಯೆ ಯಾವುದೋ ಗುಂಪಿನಲ್ಲಿ ಈಗಲೂ ಚರ್ಚೆಯಾಗುತ್ತಿದ್ದದ್ದು ಆ ಕಾಲ ಈ ಕಾಲ ಈಗಲೂ ಬದಲಾಗಲ್ಲಿಲ್ಲ ಎಂಬ ವಿಷಯ ಅಸಹನೀಯ.

ಹೆಣ್ಣು ಒಂದು ವಸ್ತು, ಅವಳನ್ನ ಬೇಕಾದ ಹಾಗೆ, ಬೇಕಾಗುವ ಸಮಯದಲ್ಲಿ ಮನೆ ಮತ್ತು ಸಮಾಜ ಬಳಸಿಕೊಂಡಿರುವ ವಿಚಾರವನ್ನ ಯಾವುದೇ ಅಳುಕಿಲ್ಲದೇ ಬರೆದ ವಿಜಯಮ್ಮ ನಮಗೆ ಮಾದರಿ. ಇದ್ದದ್ದು ಅದೇ, ಅದರಲ್ಲಿ ಮುಚ್ಚಿಡುವಂಥದ್ದು ಏನಿದೆ ಎಂಬ ದಿಟ್ಟ ನಿಲುವು ಬರೆಯುವ ಶೈಲಿ ಅನುಕರಣೀಯ. ಈ ಪುಸ್ತಕ ಆಗಿನ ಕಾಲದ ಓದಿರುವ (ಎಜುಕೇಟೆಡ್ , upper class) ಎಂದು ಕರೆಸಿಕೊಳ್ಳುವ ಮನೆಗಳಲ್ಲಿಯೂ ಸಹ ಹೆಣ್ಣಿಗೆ ತನ್ನ ಗಂಡನ ಜೊತೆಯ ಆನಂದ ಕ್ಷಣಗಳಲ್ಲೂ ಸ್ವಾತಂತ್ರ್ಯವಿಲ್ಲದ ವಿಷಯ ನನಗೆ ಒಮ್ಮೆಲೆ ಆ ಎಜುಕೇಟೆಡ್ ಮತ್ತು ಪ್ರಿವಲೇಜ್ಡ್ ಕ್ಲಾಸಿನ ಮೇಲೆ ಅಸಹ್ಯ ತರಿಸಿತ್ತು.

ಬಸಿರಾದಾಗ ಹೆಣ್ಣನ್ನೇ ದೂಷಿಸೋದು, ಸ್ವತಃ ಗಂಡು ಸಹ ನಿನಗೇನು ಗೊತ್ತಾಗೋದಿಲ್ಲ್ವಾ ಎಂದು ಎಲ್ಲರ ಮುಂದೆ ಕೇಳುವ ಪ್ರಶ್ನೆಗೆ ಮೈಯುರಿಯದಿದ್ದರೇ ಕೇಳಿ. ಒಂದು ಭಾಗ ವಿಷಾದ ಭಾವ ಮೂಡಿಸಿದರೆ ಪುಸ್ತಕದ ಎರಡನೇ ಭಾಗ ಅದನ್ನ ಮೆಟ್ಟಿನಿಂತ ಬಗೆ ತಿಳಿಯುತ್ತದೆ. ಅವರೂ ಒಮ್ಮೊಮ್ಮೆ ಸೀಮೆ ಎಣ್ಣೆ ಸುರಿದುಕೊಂಡು ಎಲ್ಲರ ಹಾಗಾಗಲು ಪ್ರಯತ್ನಿಸಿದರೂ ಮನೆಕೆಲದ ಬೋರಮ್ಮ ಬಂದು "ಸಾಕಿನ್ನು ಬಿಟ್ಟುಬಿಡಿ ಅವರನ್ನ, ನಿಮ್ಮ ಮಕ್ಕಳಿಗಾಗಿ ಬದುಕಿ" ಎಂದು ಹೇಳುವ ವಿಸ್ ಡಮ್ ಈ ಪುಸ್ತಕದ ಹರಿವನ್ನೇ ಬದಲಾಯಿಸಿಬಿಡುತ್ತದೆ. ಪ್ರಜಾಮತ, ಮಲ್ಲಿಗೆ ಇದೆಲ್ಲದರ ಜರ್ನಿ, ಬರೆದ್ದದ್ದು, ಮೊದಲ ಕಾದಂಬರಿ ಪ್ರಕಟವಾದ್ದದ್ದು, ತೊಗಲು ಬೊಂಬೆಯ ಆಟದ ಬೊಂಬೆಯ ತಾಲೀಮು, ಕಲಾಮಂದಿರ, ಅ ನ ಸುಬ್ಬರಾಯರು , ಕಮಲಮ್ಮ, ಪ್ರಕಾಶ, ಸುರೇಶ, ಗುರು ಇವರೆಲ್ಲರೂ ಅಮ್ಮನ ಹಿಂದೆ ಮುಂದೆ ಮುಂದೆ ಅಕ್ಕ ಪಕ್ಕ ಭೂಷಣಪ್ರಾಯರಾಗಿ ನಿಂತು ಈ ಕುದಿ ಎಸರನ್ನ ಕಡಿಮೆ ಮಾಡಿದ್ದಾರೆ ಎಂಬ ಖುಷಿ ಒಂದು ಕಡೆ.

ಈ ಪುಸ್ತಕ ಆಗಿನ ಕಾಲದ ಹೆಣ್ಣು ಮಕ್ಕಳ ಬೈಬಲ್. ಇದು ನಮ್ಮ ಸಮಾಜ, ಬದಲಾಯಿಸಿಕೊಳ್ಳಿ ಎನ್ನುವ ಸಣ್ಣ ಸಂದೇಶವೂ ಇದೆ. ಒಟ್ಟಿನಲ್ಲಿ ಪುಸ್ತಕ ಅಳಿಸಿತು, ನಗಿಸಿತು ಮತ್ತು ವಿಜಯಮ್ಮನವರ ಹಣೆಬೊಟ್ಟಿನ ಹಾಗೆ ಜೀವನ ಬಹಳ ಬ್ರೈಟ್ ಆಗಿದೆ ಎಂದು ತೋರಿಸಿಕೊಟ್ಟಿತು.

-ಮೇಘನಾ ಸುಧೀಂದ್ರ

ಅಭಿನವ24 products on store
Payment types
Create your own online store for free.
Sign Up Now