ಚೆಲುವಿನ ನಿಲುವು
ಚೆಲುವಿನ ನಿಲುವು
ಚೆಲುವಿನ ನಿಲುವು
Share:
₹90
Ships within 3 days
SKU :
100
Description

ಲೇಖಕರು: ವಿ.ಕೃ. ಗೋಕಾಕ್ ಬೆಲೆ: 100/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ............................... ಹದಿಮೂರು ಪ್ರಬಂಧಗಳುಳ್ಳ ಈ ‘ಚೆಲುವಿನ ನಿಲುವು’ ಹದಿಮೂರು ಬಗೆಯ ಚೆಲುವಿನ ಫೈಲುಗಳನ್ನು ಬಿಚ್ಚಿ ತೋರಿಸುತ್ತದೆ. ‘ದೈವ’ ಎಂಬ ವ್ಯಕ್ತಿನಿಷ್ಠ ಪ್ರಬಂಧವೊಂದೇ ಸಾಕು ವಿನಾಯಕ ಪ್ರಬಂಧ ರಚನೆಯ ಪ್ರತಿಭೆ, ಪ್ರಾಮಾಣಿಕತೆ, ಕಲಾತ್ಮಕತೆ, ಸಂವೇದನಶೀಲತೆಯ ಹಂತ ಹರವುಗಳನ್ನು ಅರಿತುಕೊಳ್ಳಲಿಕ್ಕೆ. 1936ರಲ್ಲಿ ಇಂಗ್ಲೆಂಡಿಗೆ ತೆರಳಿದ ವಿನಾಯಕರು ತಮ್ಮ ಮೆಚ್ಚಿನ ಕವಿ ಶೆಲ್ಲಿಯ ಜನ್ಮಸ್ಥಳವಾದ ‘ಫೀಲ್ಡಪ್ಲೇಸ್’ ನಿಂದ ಹಿಡಿಮಣ್ಣು ತರುವೆನೆಂದು ಸಾಂಕೇತಿಕವಾಗಿ ನುಡಿದು, ಆಕ್ಸ್ ಫರ್ಡ್ ಬಿ.ಎ.ಪದವಿಯ ಪ್ರಥಮವರ್ಗದ ಯಶಸ್ಸಿನೊಂದಿಗೆ ಮಾತೃಭೂಮಿಗೆ ಮರಳಿದರು. ಮರಳುವ ಮೊದಲು ಅಲ್ಲಿ ನಡೆದ ದೈವದಾಟವನ್ನು ಈ ಪ್ರಬಂಧದಲ್ಲಿ ವಿಸ್ತರಿಸುತ್ತಾರೆ. ಯಶಃಫಲ ಕೈಗೆ ಎಟುಕುವ ಹೊತ್ತಿಗೆ ಸ್ಕಾಟ್‍ಲಂಡ್ ಪ್ರವಾಸಮಧ್ಯದಲ್ಲಿ ಉಲ್ಬಣಿಸಿದ ಕರುಳುಬೇನೆಯಿಂದಾಗಿ ಅನಾಥರಂತೆ ಆಸ್ಪತ್ರೆಯೊಂದರ ಶಸ್ತ್ರಕ್ರಿಯೆಯ ಶರಶಯ್ಯೆಯ ಮೇಲೆ ಮಲಗುವ ಪ್ರಸಂಗ! ಈ ಪ್ರಸಂಗದ ವರ್ಣನೆಯಲ್ಲಿ ವ್ಯಕ್ತಿಯ ಬದುಕಿನಲ್ಲಿ ದೈವದ ಪಾತ್ರ, ಎಡಿನ್‍ಬರೋ ಆಸ್ಪತ್ರೆಯಲ್ಲಿ ಗುಣಮುಖರಾದ ರೋಗಿಗಳು ತೋರುವ ಮಾನವತಾಭಾವ, ಅಲ್ಲಿಯ ದಾದಿಗಳು ವ್ಯಕ್ತಪಡಿಸುವ ಮಾತೃಭಾವ, ಕೊನೆಗೆ ‘ವೈವಾ' ಪರೀಕ್ಷೆ ಇಲ್ಲದೆಯೇ ಆಕ್ಸ್ ಫರ್ಡಿನ ಕುಲಪತಿಗಳೂ ಪ್ರಾಧ್ಯಾಪಕರೂ ಗೋಕಾಕರಿಗೆ ಅವರ ಶ್ರೇಷ್ಠತೆಯನ್ನು ಗುರುತಿಸಿ - ಪ್ರಥಮ ದರ್ಜೆಯ ಪದವಿಯನ್ನು ದಯಪಾಲಿಸಿ ತೋರಿದ ಗುಣಗ್ರಾಹಿತ್ವ - ಈ ಎಲ್ಲ ಅಂಶಗಳನ್ನು ಒಂದೊಂದಾಗಿ ಪ್ರಬಂಧಕಾರರು ಎತ್ತಿತೋರಿಸುವಾಗ ವಾಚಕನ ಅಭಿಮಾನ ಉಕ್ಕಿಬಂದು ಈ ಕನ್ನಡಪುತ್ರನ ಸಿದ್ಧಿಯನ್ನೂ ಶ್ರದ್ಧೆಯನ್ನೂ ನೆನೆದು ಪುಲಕಿತನಾಗುತ್ತೇನೆ. ‘ನನ್ನ ಜೀವನದ ಚಮತ್ಕತಿಗಳಲ್ಲಿ ಇದೊಂದು. ನಾವು ನಮ್ಮ ಜೀವನವನ್ನು ಬಾಳಿದರೂ, ದೈವವೇ ಅದರ ನಕ್ಷೆಯ ರೂಪರೇಷೆಗಳನ್ನು ಬರೆಯುತ್ತಿರುವುದೆಂದು ಅನೇಕ ಸಲ ನನಗೆನ್ನಿಸಿದೆ’ ಎಂದು ಗೋಕಾಕರು ನುಡಿಯುವಾಗ ಇದೇ ಶ್ರದ್ಧೆ, ಸಂಸ್ಕೃತಿಗಳಲ್ಲಿ ಬೆಳೆದುಬಂದ ನಾವು ಅವರ ಈ ಸಂವೇದನೆಗೆ ಹೌದೆಂದು ಸ್ಪಂದಿಸುತ್ತೇವೆ. ‘ದೈವ’ದಲ್ಲಿ ವಿನಾಯಕರು ತಮ್ಮ ವ್ಯಕ್ತಿತ್ವದ ಕವಚವನ್ನೇ ತೆರೆದಿಟ್ಟು ಅಂತರಂಗದ ದರ್ಶನವನ್ನು ಮಾಡಿಸಿದ್ದಾರೆ.

-ಎನ್ಕೆ (ಮುನ್ನುಡಿಯಿಂದ)

ಅಭಿನವ24 products on store
Payment types
Create your own online store for free.
Sign Up Now