ಪಂಪನ ವಿಕ್ರಮಾರ್ಜುನ ವಿಜಯ (ತಿಳಿಗನ್ನಡ ಅವತರಣ)
ಪಂಪನ ವಿಕ್ರಮಾರ್ಜುನ ವಿಜಯ (ತಿಳಿಗನ್ನಡ ಅವತರಣ)
ಪಂಪನ ವಿಕ್ರಮಾರ್ಜುನ ವಿಜಯ (ತಿಳಿಗನ್ನಡ ಅವತರಣ)
Share:
₹225
Ships within 3 days
SKU :
100
Description

ಲೇಖಕರು: ಎಚ್.ಎಸ್. ವೆಂಕಟೇಶಮೂರ್ತಿ ಬೆಲೆ: 250/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ಈವರೆಗೆ ಮೂರು ಮುದ್ರಣ ಕಂಡಿದೆ...

ನಾವೆಲ್ಲಾ ಈ ತಲೆಮಾರಿನ ಓದುಗರು; ಬಹುತೇಕರು ಕೇವಲ ಸಮಯ ಕಳೆಯಲೋ, ಮನರಂಜನೆಗೋ ಕತೆಕಾದಂಬರಿಗಳನ್ನು ಓದುವ ಅಭಿರುಚಿಯುಳ್ಳವರು. ಗಂಭೀರವಾಗಿ ಸಾಹಿತ್ಯದ ಅಧ್ಯಯನ, ಓದು-ಬರಹವೆಂದು ತಮ್ಮ ಸಮಯ, ಆಸಕ್ತಿಯನ್ನು ಅದಕ್ಕಾಗಿ ಮೀಸಲಿಡುವವರು ತೀರ ವಿರಳ. ಗ್ರಾಂಥಿಕ ಭಾಷೆಯ ಹೊರತಾಗಿ ಲೇಖಕರ ಪ್ರಾದೇಶಿಕ ಭಾಷೆಯಲ್ಲಿಯೋ, ಗ್ರಾಮ್ಯ ಭಾಷೆಯಲ್ಲಿಯೋ ಕೃತಿಗಳಿದ್ದರೆ ತಮ್ಮ ಓದಿಗಿದು ನಿಲುಕಲಾರದೆಂದು ಮೂಗು ಮುರಿಯುವವರೇ ಹೆಚ್ಚು. ಅಂತಹುದರಲ್ಲಿ ನೂರಾರು ವರ್ಷಗಳ ಹಿಂದಿನ ಹಳೆಗನ್ನಡ ಕಾವ್ಯಗಳನ್ನು ಓದಿ ಅರ್ಥೈಸಿಕೊಳ್ಳುವವರು ಎಷ್ಟು ಜನ? ಕನ್ನಡದ ಆದಿಕವಿ ಪಂಪ ವಿರಚಿತ ಹಳೆಗನ್ನಡ ಕೃತಿಗಳನ್ನು ಅರ್ಥೈಸಿಕೊಳ್ಳಲಾಗದಿದ್ದರೂ, ನಮ್ಮ ಭಾಷೆಯ ಉಗಮದ, ಕನ್ನಡ ಸಾಹಿತ್ಯದ ಆರಂಭಿಕ ಕೃತಿಗಳ ಬಗ್ಗೆ ಸಂಕ್ಷಿಪ್ತವಾಗಿಯಾದರೂ ಅವುಗಳ ಕಿರು ಪರಿಚಯ ಕನ್ನಡಿಗರಿಗಿರಬೇಕಾದುದು ಅತ್ಯವಶ್ಯ. ಈ ಅಗತ್ಯವನ್ನು ಮನಗಂಡು ಇಂದಿನ ಆಧುನಿಕ ಪ್ರಮುಖ ಕವಿಗಳಲ್ಲಿ ಒಬ್ಬರಾದ ಎಚ್. ಎಸ್. ವೆಂಕಟೇಶಮೂರ್ತಿಯವರು ಹಲವಾರು ಹಳೆಗನ್ನಡ ಕೃತಿಗಳನ್ನು ಈ ತಲೆಮಾರಿನ ಓದುಗರಿಗೂ ಲಭ್ಯವಾಗುವಂತೆ ಹೊಸಗನ್ನಡ ಅವತರಣಕ್ಕೆ ಸರಳೀಕರಿಸಿದ್ದಾರೆ. ಅದರಲ್ಲಿ ಪಂಪನ "ವಿಕ್ರಮಾರ್ಜುನ ವಿಜಯ" ಕೃತಿಯೂ ಒಂದು. ಪಂಪಭಾರತದ ಕಥಾಸಾರವನ್ನು ಗದ್ಯರೂಪದಲ್ಲಿ ಮತ್ತು ಕಾವ್ಯದ ಸಾಲುಗಳನ್ನು ಯಥಾವತ್ತಾಗಿ ಹಳೆಗನ್ನಡದಿಂದ ತಿಳಿಗನ್ನಡಕ್ಕೆ ಸರಳೀಕರಿಸಿದ್ದಾರೆ. ಇದಲ್ಲದೆ, ಎಚ್ಚೆಸ್ವಿಯವರು ವಿಕ್ರಮಾರ್ಜುನ ವಿಜಯ ಕೃತಿಯ ಕೆಲವು ಪ್ರಸಿದ್ಧ ಪಂಪೋಕ್ತಿಗಳನ್ನು ಪ್ರತ್ಯೇಕವಾಗಿ ಓದಲು ಅನುಕೂಲವಾಗುವಂತೆ ಪಟ್ಟಿಮಾಡಿ ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು -

  • ಗರ್ವಮೆ ದೋಷಂ, ಅಳ್ತಿಗಂ ದೋಷಮೆ? (ಗರ್ವಕ್ಕೆ ದೋಷ; ಪ್ರೀತಿಗೆ ದೋಷವೇ?)

  • ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು, ತಳ್ತೊಡೆ ಕಾವ್ಯ ಬಂಧಂ ಒಪ್ಪುಗುಂ. (ದೇಸಿಯಲ್ಲಿ ಹೋಗುವುದು, ಹೊಕ್ಕು ಮಾರ್ಗದಲ್ಲಿ ಸೇರುವುದು, ಸೇರಿದಾಗ ಕಾವ್ಯ ಬಂಧವು ಒಪ್ಪುವುದು)

  • ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತಾಟವಿ ಸೊರ್ಕಿದಾನೆಯಂ ಬೆಳೆವುದು. (ಲಲಿತ, ವಿಚಿತ್ರ, ಪತ್ರ ಫಲ ಪುಷ್ಪಗಳಿಂದ ಕೂಡಿದ ಅಡವಿಯು ಸೊಕ್ಕಿದ ಆನೆಗಳನ್ನು ಬೆಳೆಯುವದು)

  • ದಿವ್ಯ ಮುನಿಗಳ್ ಏಗೆಯ್ದೊಡಂ ತೀರದೇ? (ದಿವ್ಯ ಮುನಿಗಳು ಏನನ್ನು ತಾನೆ ಮಾಡರು?)

  • ಗಾಂಗೇಯನುಂ, ಪ್ರತಿಜ್ಞಾಗಾಂಗೇಯನುಂ ಒರ್ಮೆ ನುಡಿದುದಂ ತಪ್ಪುವರೇ? (ಗಾಂಗೇಯನೂ, ಪ್ರತಿಜ್ಞಾಗಾಂಗೇಯನೂ ಒಮ್ಮೆ ಆಡಿದ ಮಾತಿಗೆ ತಪ್ಪುವರೆ?)

  • ಕೊಂದರ್ ಕೊಲೆಸಾವರ್! (ಕೊಂದವರು ಒಂದಲ್ಲ ಒಂದು ದಿನ ತಾವೂ ಕೊಲೆಗೀಡಾಗುವರು)

  • ಏವುದೊ ಶುಚಿಯಲ್ಲದನ ಗಂಡುಂ ತೊಂಡುಂ!? (ಶುಚಿಯಿಲ್ಲದವನ ಪೌರುಷ, ಪರಾಕ್ರಮ ಏತಕ್ಕೆ ಬಂತು?)

  • ದಿವ್ಯ ಮುನಿ ವಾಕ್ಯಂ ಅಮೋಘ ವಾಕ್ಯಮಕ್ಕುಂ. (ದಿವ್ಯ ಮುನಿವಾಕ್ಯವು ಯಾವಾಗಲೂ ಅಮೋಘ ವಾಕ್ಯವಾಗಿರುವುದು)

  • ಈ ತೊಡವೇವುದೋ ರೂಪೆ ಸಾಲದೆ? (ಈ ಆಭರಣಗಳ್ಯಾತಕ್ಕೆ? ರೂಪವೊಂದೇ ಸಾಲದೆ?)

  • ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನಿಂಪುಗಳ್ಗಾಗರಮಾದ ಮಾನಸರೆ ಮಾನಸರ್! (ತ್ಯಾಗದ, ಭೋಗದ, ವಿದ್ಯೆಯ, ಗಾಯನದ, ಗೋಷ್ಠಿಯ, ಸುಖವಾದ ಇಂಪುಗಳಿಗೆ ಆಸರೆಯಾದ ಮನುಷ್ಯರೇ ಮನುಷ್ಯರು!)

  • ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ. (ಯಾರೇ ತಡೆದರೂ ಬಿಡದೆ ನನ್ನ ಮನವು ಬನವಾಸಿ ದೇಶವನ್ನು ನೆನೆಯುವುದು)

  • ಏನೇನಾಗದೊ ಪಾಪದ ಫಳಂ ಎಯ್ದೆವಂದ ದೆವಸದೊಳಾರ್ಗಂ? (ಪಾಪದ ಫಲ ಹತ್ತಿರಕ್ಕೆ ಬಂದ ದಿವಸ ಯಾರ್ಯಾರಿಗೆ ಏನೇನಾಗದು?)

  • ಬಡಿಗಂಡನಿಲ್ಲ ಪಾಲನೆ ಕಂಡಂ! (ಬಡಿಗೆ ಕಾಣಲಿಲ್ಲ; ಹಾಲು ಮಾತ್ರ ಕಂಡಿತು) ಭಾವಾರ್ಥ - ಬೆಕ್ಕು ಕದ್ದು ಹಾಲು ಕುಡಿಯುವಾಗ ದೊಣ್ಣೆಯನ್ನು ಕಾಣದೆ ಹಾಲನ್ನು ಮಾತ್ರ ಕಂಡಿತು.

  • ಬಗೆಯದೆ ಮೆಯ್ಸುಕಮಂ, ಬಗೆ ಪಗೆವರ ಕಡುವೆರ್ಚನ್. (ಮೈ ಸುಖವನ್ನು ಕುರಿತು ಯೋಚಿಸದಿರು; ಶತ್ರುಗಳ ವೈಭವದ ಹೆಚ್ಚಳವನ್ನು ಮಾತ್ರ ಯೋಚಿಸು)

  • ನಾಲಗೆ ಕುಲಮಂ ತುಬ್ಬುವವೊಲು ಉರದೆ ನೀಂ ಕೆಡೆ ನುಡಿವೈ! (ನಾಲಗೆ ಕುಲವನ್ನು ತೋರಿಸುವುದು ಎನ್ನುವಂತೆ ನೀನು ಸುಮ್ಮನಿರದೆ ಕೆಟ್ಟ ಮಾತು ನುಡಿದೆ)

  • ಸೂಳ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್! (ಮಹಾಯುದ್ಧರಂಗಲಿ ನಿನ್ನ ಸರದಿಯೂ ಬರುವುದು ಕಾಣಯ್ಯ!)

  • ಖಳ ನೊಳವಿಂಗೆ ಕುಪ್ಪೆ ವರಂ. (ಖೂಳ ನೊಣಕ್ಕೆ ತಿಪ್ಪೆಯೇ ವರ ಅಂದರೆ ಶ್ರೇಷ್ಠ)

  • ಕುಲಮೆಂಬುದುಂಟೆ? ಬೀರಮೆ ಕುಲಂ! (ಕುಲ ಎನ್ನುವುದುಂಟೆ? ವೀರವೇ ಕುಲ)

  • ಕುಲಂ ಕುಲಮಲ್ತು! ಚಲಂ ಕುಲಂ, ಗುಣಂ ಕುಲಂ, ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ! (ಕುಲವಲ್ಲಯ್ಯ ಕುಲ! ಛಲ ಕುಲ, ಗುಣ ಕುಲ, ಅಭಿಮಾನ ಕುಲ, ಪೌರುಷವೇ ಕುಲ)

  • ತಮ್ಮೊಳ್ ಅಗ್ಗಲಿಸಿ ಪೊದಳ್ದು ಪರ್ವಿದ ಅವಿವೇಕತೆಯಿಂ ನೃಪ ಚಿತ್ತವೃತ್ತಿ ಸಂಚಲಂ! ಅದರಿಂದಂ ಓಲಗಿಸಿ ಬಾಳ್ವುದೆ ಕಷ್ಟಂ ಇಳಾಧಿನಾಥರಂ! (ತಮ್ಮೊಳಗೆ ಹೆಚ್ಚಾಗಿ ಹರಡಿ ಹಬ್ಬಿದ ಅವಿವೇಕದಿಂದ ರಾಜರ ಚಿತ್ತವೃತ್ತಿಯು ಚಂಚಲವಾದುದು! ಆದುದರಿಂದ ಈ ಭೂಮಿಪಾಲರನ್ನು ಓಲೈಸಿ ಬಾಳುವುದೇ ಬಹಳ ಕಷ್ಟ.!)

  • ಭಾನುವೆ ಸಾಲದೆ ಪಗಲೆನುತಾನುಂ ದೀವಿಗೆಗಳ್ ಉರಿದೊಡೇಂ, ನಂದಿದೊಡೇಂ? (ಸೂರ್ಯನೊಬ್ಬನೇ ಸಾಲದೆ, ಹಗಲಲ್ಲಿ ಅದೆಷ್ಟು ದೀಪಗಳು ಉರಿದರೇನು? ಆರಿದರೇನು?)

  • ಒಡಲುಂ ಪ್ರಾಣಮುಮುಂ ಎಂಬಿವು ಕಿಡಲಾದವು. ಜಸಮೊಂದೆ ಕಿಡದು. (ಒಡಲು ಪ್ರಾಣ ಎಂಬ ಎರಡೂ ಕೆಟ್ಟುಹೋಗತಕ್ಕವು; ಕೆಡದೆ ಉಳಿಯುವಂಥದ್ದು ಕೀರ್ತಿಯೊಂದೇ)

ಅಭಿನವ24 products on store
Payment types
Create your own online store for free.
Sign Up Now