ಪ್ರೀತಿಸುವುದೆಂದರೆ...
ಪ್ರೀತಿಸುವುದೆಂದರೆ...
ಪ್ರೀತಿಸುವುದೆಂದರೆ...
Share:
₹90
Ships within 3 days
SKU :
98
Description

ಅನುವಾದಕರು: ಕೆ.ವಿ. ನಾರಾಯಣ, ಎಚ್.ಎಸ್. ರಾಘವೇಂದ್ರರಾವ್ ಬೆಲೆ: 100/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ....................................... ಎರಿಕ್ ಪ್ರಾಮ್ : ಒಂದು ಆಲೋಚನಾ ಆವರ್ತ!

ಎರಿಕ್ ಕುರಿತ ವ್ಯಕ್ತಿ ಪರಿಚಯ ಇಲ್ಲಿ ಅನಾವಶ್ಯ.‌ಅದಾಗಲೇ ಬಹಳಷ್ಟು ಜನರು ಇವರ ಬರಹ ಮತ್ತು ಆಲೋಚನೆಗಳ ಕುರಿತಾಗಿ ಬಹಳವಾಗಿ ಓದಿಕೊಂಡಿದ್ದಾರೆ. ನಾನೋ ಹೊಸಬ. ಅವರ‌ ಬರಹಗಳ ಕುರಿತ ಪ್ರವೇಶಿಕೆಯೇ 'ಆರ್ಟ್ ಆಫ್ ಲವಿಂಗ್' ಕೃತಿಯಿಂದ ಶುರುವಾಗಿದೆ. ಎರಿಕ್ ಸ್ವತಃ ಹೇಳುವ ಹಾಗೆ ಒಲವನ್ನ ಕವಿ ಮತ್ತು ಮತ ಪ್ರಚಾರಕರ ಹೊರತಾದ ಭಾಷೆಯಲ್ಲಿ/ನೋಟದಲ್ಲಿ ಮಾತಾಡುವ ಪ್ರಯತ್ನ ಮಾಡಿದ್ದಾರೆ. ಅಂದರೆ ಒಲವಿನ ಕುರಿತಾಗಿ ಹೆಚ್ಚು ಭಾವೋದ್ವೇಗಗಳನ್ನು ಬದಿಗಿಟ್ಟು ಸಾಮಾನ್ಯ ಮತ್ತು ಬೌದ್ಧಿಕ ದೃಷ್ಟಿಗಳ ಮೂಲಕ ನೋಡುವ ಮತ್ತು ನಮಗೆ ಕಾಣಿಸುವ ಪ್ರಯತ್ನ‌ ಇದಾಗಿದೆ.

ಎರಿಕ್ 1941 ರಿಮದ 1984 ವರೆಗಿನ ಅವಧಿಯಲ್ಲಿ ಸತತವಾಗಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವೆಲ್ಲವು ಮನುಷ್ಯನ ಆಲೋಚನೆ ಮತ್ತು ನಡವಳಿಕೆಗಳ ಕುರಿತಾದ ಮನೋವೈಜ್ಞಾನಿಕ, ಭಾಷಿಕ ಅಧ್ಯಯನಗಳಾಗಿವೆ. ಮನುಷ್ಯನ ಬದುಕಿನಲ್ಲಿ ಹಾದುಹೋಗುವ ವಿವಿದ ತೆರನಾದ ವಿಷಯ, ವರ್ತನೆಗಳ ಕುರಿತಾದ ಅಪರೂಪದ ಆಲೋಚನಾ ಸರಣಿ ಇವಾಗಿವೆ.

  • ಪ್ರೀತಿ ಅನ್ನುವುದು ಕಲೆಯೇ? :

ಪ್ರೀತಿ - ಮನುಷ್ಯನೊಳಗಣ ಒಂದು‌ ಕಲೆ ಎಂಬುದು ಎರಿಕ್‌ ಮಾತು. ಈ ಬರಹದಲ್ಲಿ ಅವರು ಬಹಳ ಸಾರಿ 'ಪ್ರೀತಿಸುವುದು ಬಹಳ ಸುಲಭ' ಎನ್ನುವ ಲೋಕರೂಢಿಯ ಮಾತು ಪ್ರಸ್ತಾಪಿಸುತ್ತಾ ಅದು‌ ಸುಳ್ಳೆಂದು.. ಪ್ರೀತಿಯಷ್ಟು ವಿಪುಲವಾಗಿ ವಿಫಲಗೊಂಡ ಕ್ರಿಯೆ ಬೇರಾವುದೂ ಇಲ್ಲವೆಂದು ವಾದಿಸುತ್ತಾರೆ. ಎರಿಕ್ ಅವರ ಈ ವಾದ ಜನಪ್ರಿಯವಾದ ಪ್ರೀತಿ-ಪ್ರೇಮಗಳ ವ್ಯಾಖ್ಯಾನದ ಧಾಟಿಯಲ್ಲೇ ಇದೆ. ಆದರೆ ಅದು ಯಾಕೆ ಕಲೆ ಎನ್ನುವುದರ ಕುರಿತು ಚರ್ಚೆಯಿದೆ. ಆದರೆ ಈ ಚರ್ಚೆ ಮಾತ್ರ ಇದು‌ಕಲೆಯೇ ಎಂದು ಸಾಬೀತು ಮಾಡುತ್ತಾ ನಿಲ್ಲುವುದಿಲ್ಲ.. ನಮ್ಮ ಯೋಚನೆಗಳ ಹೊಸದಾರಿಯ ತೆರೆದಿಟ್ಟು ಅದು‌ ಮತ್ತೊಂದು‌ ಕಡೆಗೆ ಹೊರಳುತ್ತದೆ.

  • ಪ್ರೀತಿಯ ಮೀಮಾಂಸೆ : ಮಾನವ ಶಾಸ್ತ್ರದಿಂದ ಶುರುವಾಗುವ ವಿವರಣೆ, ಆಧುನಿಕ ಕಾಲದ ಮನುಷ್ಯನ ನಡವಳಿಕೆಗಳ ವರೆಗೂ ವಿಸ್ತರಿಸಿಕೊಂಡಿದೆ. ಪ್ರಕೃತಿ, ತಾಯಿ-ತಂದೆ ಪ್ರೀತಿ, ಸಮಾಜ, ಗಂಡು ಹೆಣ್ಣು ಮತ್ತು ಲೈಂಗಿಕತೆ, ಮನುಷ್ಯನ ವಿಕೃತ-ಹತಾಶೆ ಹೀಗೆ ಹತ್ತಾರು ವ್ಯಾಪ್ತಿಗಳವರೆಗೆ ಹರಡಿಕೊಂಡಿದೆ. ಇದನ್ನ ಪುನಃ ಪುನಃ ಓದುವ ಅಗತ್ಯವಿದೆ ನನಗೆ. ಮನೋವೈಜ್ಞಾನಿಕವಾಗಿ ವಿವರಣೆಗಳನ್ನು ಅರ್ಥೈಸಿಕೊಳ್ಳುವುದು ಒಂದು ಕವಿತೆಯ ಓದಿನಂತೆ ಅಲ್ಲ, ಅಥವಾ ಹಾಗೆಯೇ ಅನಿಸಿದರೂ ಅದರ ಹಲವು ಓದುಗಳ ನಂತರ ಅದು ಮತ್ತಷ್ಟು ವಿಸ್ತರಿಸಿಕೊಳ್ಳುವ ಅರ್ಥಸಾಧ್ಯತೆಯನ್ನು ನಮ್ಮ ಆಲೋಚನಾ ವಲಯದಲ್ಲಿ ತೆರೆದಿಡುತ್ತಾ ಹೋಗುತ್ತದೆ. ಹತ್ತಿರವಾದಷ್ಟೂ ಅಗಲವೂ ಅನಂತವೂ ಆಗುವ ಕಡಲಿನಂತೆ.

  • ಪ್ರೀತಿಯ ವಸ್ತುಗಳು : ಪ್ರೀತಿಯೆಂಬುವ ದೃಷ್ಟಿಕೋನವು ವ್ಯಕ್ತಿ ಮತ್ತು ಪ್ರಪಂಚದ ನಡುವಿನ ಸಂಬಂಧವಾಗಿ ಹೇಗೆ ರೂಪುಗೊಳ್ಳುತ್ತದೆ ಎಂಬುದು ಈ ಅಧ್ಯಾಯದಲಿ ಚರ್ಚೆಯಾಗಿದೆ. ಪ್ರೀತಿಯ ಬಗೆಗಿನ ನಮ್ಮ ಹಲವು ರೂಢಿಗತವಾದ ತಪ್ಪು ಅಭಿಪ್ರಾಯಗಳನ್ನು ನಮ್ಮ ಮೇಲೆ ನಾವು ಹೇರಿಕೊಂಡಿದ್ದೇವೆ. ಅಷ್ಟಕ್ಕೇ ಸೀಮಿತರಾಗಿ ಪ್ರೀತಿಯ ವ್ಯಾಪ್ತಿಯನ್ನು ಸಂಕುಚಿತಗೊಳಿಸಿಕೊಂಡಿದ್ದೇವೆ. ಆದರೆ ಎರಿಕ್ ಈ ವ್ಯಾಪ್ತಿಯಾಚೆಗೆ 'ಒಬ್ಬನ ಪ್ರೀತಿಸುವ ಮುಖಾಂತರ ಜಗತ್ತನ್ನು ಪ್ರೀತಿಸುವ ಶಕ್ಯತೆ' ಉಂಟಾಗಬೇಕೆನ್ನುತ್ತಾರೆ. ಈ ನಿಟ್ಟಿನಲ್ಲಿ ಸೋದರಪ್ರೀತಿ, ತಾಯಿಪ್ರೀತಿ, ಸ್ವಪ್ರೀತಿ, ಕಾಮ ಪ್ರೀತಿ, ದೈವಪ್ರೀತಿಗಳ ಕುರಿತ ಆಲೋಚನ ಸರಣಿಯೇ ಇಲ್ಲಿದೆ.

  • ಪ್ರೀತಿಯ ಅನುಷ್ಠಾನ : ಇಲ್ಲಿಯವರೆಗೂ ಪ್ರೀತಿಯೆಂಬುವ ಕಲೆಯ ತಾತ್ವಿಕತೆಯನ್ನು ಮಾತಾಡಿದ ಎರಿಕ್, ಅದನ್ನು ಪ್ರಾಯೋಗಿಕವಾಗಿ ಆಚರಣೆಗೆ ತರುವ ಕುರಿತು ಹೆಚ್ಚು ಮಾತಾಡುವುದಿಲ್ಲ. ಬದಲಿಗೆ 'ಪ್ರೀತಿಸುವುದು ಅತ್ಯಂತ ವೈಯಕ್ತಿಕವಾದ, ಕೇವಲ ಅನುಭವವೇದ್ಯವಾದ ಸಂಗತಿ' ಎಂದುಬಿಡುತ್ತಾರೆ.' ಪ್ರೀತಿಯ ಪೂರ್ವಭಾವಿಯಾದ ಗುಣ, ಸಾಮರ್ಥ್ಯ ಕುರಿತು ಸಣ್ಣ ಚರ್ಚೆಯಿದೆ. ಆದರೆ ಇದು ಟೀವಿ಼ ಶೋಗಳು, ಪತ್ರಿಕೆಗಳ ಮನೋವೈಜ್ಞಾನಿಕ ಕಾಲಂ ಗಳ ತರಹದ ಪರಿಹಾರ ನಿರೂಪಣೆಗೆ ಹೋಗುವುದಿಲ್ಲ. ಅದಲಿಗೆ ಆ ಮಾರ್ಗಗಳ ಕುರಿತ‌ ಚಿಂತನೆಗೆ ಮುಂದಾಗುತ್ತದೆ. ಈ ಭಾಗ ಚೂರು ಬೋರ್ ಅನಿಸಬಹುದು.‌ ಕಾರಣ ಭಾಷೆ ಮತ್ತು ವಿಷಯ ಎರಡೂ ಅಕಾಡೆಮಿಕ್‌ ಸ್ವರೂಪದವು. ಯಾರಾದರೂ ಸೋದಾಹರಣವಾಗಿ ಮಾತಿನಲ್ಲಿ ವಿವರಿಸಿದರೆ ಚೆಂದ ಎನಿಸುತ್ತದೆ.

  • ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ : ಈ ಅಧ್ಯಾಯ ಕುರಿತು ಅಷ್ಟೇನೂ ಮಾತಾಡುವ ಅಗತ್ಯ ನನಗಿಲ್ಲ. ನಾನು ಭಾರತೀಯ ಸಮಾಜದಲ್ಲಿ ಅದು ಬೆಳೆದು ಬಂದು ಬಗೆ ಮತ್ತು ವಿಘಟನೆಗೊಳ್ಳುವ ಒಂದು ಸಂಧಿಕಾಲದಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ನಾನು ಇವತ್ತಿನ ಕಾಲದಲ್ಲಿ ಪ್ರೀತಿಯು ನೆಲೆಗೊಂಡಿರುವ ಕ್ರಿಯೆಯನ್ನು ಗುರುತಿಸುವುದು ಬೇರೆಯದೇ ತರಹ ಆ ಬಗ್ಗೆ‌ಮಗದೊಮ್ಮೆ ವಿಸ್ತಾರವಾಗಿ ಮಾತನಾಡಬಹುದಾಗಿದೆ. ಎರಿಕ್ ಅವರ ಈ ಅಧ್ಯಾಯ ಮತ್ತು ಭಾರತೀಯ ಸಮಾಜವನ್ನು ಮುಖಾಮುಖಿಯಾಗಿಬಹುದಾಗಿದೆ.

ಒಟ್ಟಾರೆ ಪ್ರೀತಿಸುವೆಂದರೆ..‌ ಅಂತರ್ಯದಲ್ಲಿ ಕಲೆಯನ್ನು ಹುದುಗಿಸಿಕೊಂಡ ಮಾನುಷ ಸಹಜ‌ಕ್ರಿಯೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತಿರುತ್ತದೆ. ಈ ಬದಲಾವಣೆಯೇ ನಮ್ಮಗಳ ನಡುವೆ ಹಲವು ಭಿನ್ನತೆಗಳನ್ನು ಉಂಟುಮಾಡುವುದು. ಒಳಿತು-ಕೆಡುಕು-ತಟಸ್ಥಗಳು ಸೃಷ್ಟಿಯಾಗುವುದು. ಈ ಚರ್ಚೆಗಳನ್ನು ಬದಿಗೊತ್ತಿ ಇವತ್ತು ಸಾಮಾನ್ಯನೊಬ್ಬ ಯಾಕೆ ಈ ಕೃತಿಯನ್ನು ಓದಬೇಕು. ಆತ/ಆಕೆ ಗೆ ಪ್ರೀತಿಸುವುದು ಗೊತ್ತಿಲ್ಲವೇ? ಎರಿಕ್ ರ ಪ್ರೀತಿಯ ವಿಶೇಷವೇನು ಎಂಬೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಏಳಬಹುದು. ನನಗನ್ನಿಸುವುದು ಈಗಾಗಲೇ ಹೇಳಿದಂತೆ ನಾವು ಒಳಿತು-ಕೆಡುಕು-ತಟಸ್ಥಗಳ ನಡುವೆ ಸಿಕ್ಕಿಕೊಂಡುಬಿಟ್ಟಿದ್ದೇವೆ. ಈ ನಮ್ಮದೇ ಭಿನ್ನದೃಷ್ಟಿಗಳು ವಿಪರೀತಕ್ಕೆ ಬೆಳೆದು ವಿಕೃತವಾಗ ತೊಡಗಿವೆ.‌ ಯಾಕಂದರೆ ಇಲ್ಲಿ ನಮ್ಮ ಪ್ರೀತಿಯು ದಿಕ್ಕುಗೆಟ್ಟು ಸಾಗುತ್ತಿದೆ. ಅದು ದೈವಪ್ರೀತಿ, ದೇಶಪ್ರೀತಿ, ಭಾಷಾ ಪ್ರೀತಿ, ಬಾಂದವ್ಯ ಪ್ರೀತಿಗಳಾಗಿ ವಿಘಟಬೆಗೊಳ್ಳುತ್ತಾ ಮಾನವ ಪ್ರೀತಿಯನ್ನ ಕಳೆದುಕೊಳ್ಳುತ್ತಿದೆ. ಇಂತಹದೊಂದು ಮೌಲ್ಯಮಾಪನ ನಮಗೆ ಸಿಕ್ಕುವುದು ಇಂತಹ ಒಂದು ನಿರ್ಲಿಪ್ತ ಓದುಗಳಿಂದ ಮಾತ್ರ.


ಭಾಷಿಕ‌ ಮತ್ತು ಮನೋವೈಜ್ಞಾನಿಕ ಪರಿಭಾಷೆಯ ಕೃತಿಗಳನ್ನು ಅನುವಾದಿಸುವುದು ಸವಾಲಿನ‌ ಕೆಲಸ. ವಿಷಯದ ತಾತ್ವಿಕತೆ ಸರಿಯದಂತೆ ಇಡಿಯಾಗಿ‌ ಹಿಡಿದು ಮತ್ತೊಂದು ನುಡಿಗೆ ಅದನು ಒದಗಿಸಬೇಕು. ಮತ್ತು ಅದನ್ನು ಸ್ಥಳೀಯ ನೆಲೆಯಲ್ಲಿ ವಿಸ್ತರಿಸಬೇಕು.. ಈ ಕಾರ್ಯಕ್ಕಾಗಿ ಕೆ.ವಿ.ನಾರಾಯಣ & ಎಚ್. ಎಸ್. ರಾಘವೇಂದ್ರ ರಾವ್ ಅವರನ್ನು ಅಭಿನಂದಿಸುವೆ.


ಪ್ರೀತಿಸುವುದೆಂದರೆ... ಹುಡುಕುತ್ತಾ ತನ್ನ ತಾ ಕಳೆದುಕೊಳ್ಳುವ ಕಲೆ! ~ ಆರ್ ಪಿ

ಅಭಿನವ24 products on store
Payment types
Create your own online store for free.
Sign Up Now