ಅಪರೂಪದ ಕತೆಗಳು

Share
  • Ships within 3 days
₹ 270
Description

ಲೇಖಕರು: ಕೆ.ವಿ. ತಿರುಮಲೇಶ್
ಬೆಲೆ: 300/-
ರಿಯಾಯಿತಿ: 10%
ಪ್ರಕಾಶನ: ಅಭಿನವ, ಬೆಂಗಳೂರು
...........................
'ಅಪರೂಪದ ಕತೆಗಳು' ನಾನು ಕಳೆದ ಏಳೆಂಟು ವರ್ಷಗಳಲ್ಲಿ ಬರೆದ ಕೆಲವು ಕತೆಗಳ ಸಂಕಲನ; ಆದ್ದರಿಂದ ಅಪರೂಪದ ಕತೆಗಳು. ಆದರೆ ಇನ್ನು ಯಾರೂ ಸಾಮಾನ್ಯವಾಗಿ ಹೇಳದ ಕತೆಗಳು ಎಂಬ ಅರ್ಥವೂ ಈ ಪದಗಳಿಗೆ ಇದೆ ಎಂದು ಕಾಣುತ್ತದೆ, ಅದು ಪ್ರತಿಯೊಬ್ಬ ಲೇಖಕನ ಆಸೆ. ಆದರೆ ನಿರ್ಣಯ ಓದುಗನಿಗೆ ಬಿಟ್ಟದ್ದು.
ಸೃಜನಾತ್ಮಕವಾಗಿ ಬರೆಯುತ್ತ ಲೇಖಕ ಹೆಚ್ಚು ಸ್ವಪ್ರಜ್ಞನಾಗುವುದು ಸರಿಯಲ್ಲ, ಸಾಧ್ಯವೂ ಇಲ್ಲ. ಆದರೂ ಲೇಖಕನನ್ನು ಹೆಚ್ಚೆಚ್ಚು ಸ್ವಪ್ರಜ್ಞೆಗೆ ತಳ್ಳುವ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ - ಇದು ಹಿಂದಿಗಿಂತಲೂ ಇಂದು ಜಾಸ್ತಿ ಅನಿಸುತ್ತದೆ. ಯಾಕೆಂದರೆ ಇದು ವೈಚಾರಿಕತೆಯ ಯುಗ, ಪ್ರಶ್ನೆಯ ಯುಗ. ಅವು ನನ್ನ ಬರಹಗಳನ್ನೂ ಬಾಧಿಸಿರಬಹುದು. ಅಂಥದೆಲ್ಲ ನನ್ನ ಕೈಮೀರಿದ ಪ್ರಮೇಯ.
ಕತೆ ಕವಿತೆಗಳನ್ನು ಬರೆಯಲು ಅಪಾರವಾದ ಅನುಭವ ಬೇಕು ಎನ್ನುತ್ತಾರೆ, ನಿಜ, ಆದರೆ ಅದರ ಜತೆಗೇ ಒಂದು ತರದ ಮುಗ್ಧತೆಯೂ ಬೇಕಲ್ಲವೇ? ಅದೊಂದು ತರದ ‘ಬಿಟ್ಟುಕೊಡುವ’ ಮುಗ್ಧತೆ, ಆದದ್ದಾಗಲಿ ಎನ್ನುವಂಥದು, ಇಂಗ್ಲಿಷ್‍ನಲ್ಲಿ ‘ಅಬಾಂಡನ್’ ಎನ್ನುತ್ತಾರೆ. ನಿಯಂತ್ರಣದ ಜತೆಗೇ ಅಬಾಂಡನ್ ಕೂಡ ಬೇಕು. ಇದು ಬರಹವನ್ನು ಅನಿರೀಕ್ಷಿತತೆಗೆ ಒಡ್ಡುತ್ತದೆ. ಇದು ಎಲ್ಲಾ ಲೇಖಕರ ಅನುಭವ ಎಂದುಕೊಂಡಿದ್ದೇನೆ. ನನ್ನಂಥವರಿಗೆ ಪ್ರತ್ಯೇಕವಾಗಿಯೂ ಪ್ರಾಯೋಗಿಕತೆ ಇಷ್ಟ. ಪ್ರಾಯೋಗಿಕತೆ ಕೂಡ ಒಂದು ರಿಸ್ಕ್, ಆದರೆ ಎನೂ ಮಾಡುವ ಹಾಗಿಲ್ಲ. ಈ ಸಂಕಲನಕ್ಕೆ “ಕೊನೆ ಕೊನೆಯ ಕತೆಗಳು” ಎಂದು ಹೆಸರಿಡೋಣ ಎಂದುಕೊಂಡದ್ದೂ ಇದೆ. ಬದುಕಿನ ಎಪ್ಪತ್ತರ ದಶಕದಲ್ಲಿರುವ ನನ್ನ ಕತೆಗಳು ಇವು. ನಸುಕಿನಲ್ಲಿ ಮಬ್ಬಿರುವಂತೆ ಸಂಜೆಯಲ್ಲೂ ಮಬ್ಬಿರುತ್ತದೆ, ಸಂಜೆಯ ಮಬ್ಬು ಜಾಸ್ತಿಯಾಗುತ್ತ ಇರುತ್ತದೆ. ಈ ಮಬ್ಬಿನಲ್ಲಿ ನೀನು ಅನಿಸಿದಂತೆ ಬರೆ ಎನ್ನುತ್ತದೆ ಮನಸ್ಸು.
ಹೀಗೆಲ್ಲ ಹೇಳುತ್ತ ಹೋಗುವುದು ಕೂಡ ನನಗೆ ಇಷ್ಟದ ಸಂಗತಿಯಲ್ಲ. ಮಬ್ಬಿನಲ್ಲಿ ಸುಮ್ಮನೆ ಕೂತುಕೊಳ್ಳುವುದೇ ನನಗೆ ಇಷ್ಟದ ಸಂಗತಿ. ಕತೆಗಳಿಗೆ ಪೂರ್ವಭಾವಿಯಾಗಿ ಕೆಲವು ಮಾತುಗಳನ್ನು ಹೇಳುವ ವಾಡಿಕೆಯನ್ನು ಮನ್ನಿಸಿ ಈ ಮಾತುಗಳನ್ನು ಹೇಳಿದೆ, ಅಷ್ಟೆ.

  • ಕೆ. ವಿ. ತಿರುಮಲೇಶ್ (ಅರಿಕೆಯಿಂದ