ವಿಸರ್ಜನೆ

Share
  • Ships within 3 days
₹ 90
Description

ಲೇಖಕರು: ಅರವಿಂದ
ಬೆಲೆ: 125/- ಪುಟಗಳು: 128
ರಿಯಾಯಿತಿ: 10%
ಪ್ರಕಾಶನ: ಅಭಿನವ, ಬೆಂಗಳೂರು
.......................
ಇಲ್ಲಿನ ಕವಿತೆಗಳನ್ನು ನಿಧಾನವಾಗಿ ಓದಬೇಕು. ವಿಳಂಬ ಕಾಲದ ಸಂಗೀತದ ಹಾಗೆ ಕೇಳಬೇಕು. ಆಗ ಅನ್ಯ ಸ್ವರಗಳು ಸೇರಿಕೊಳ್ಳುತ್ತವೆ. ಆ ಅನ್ಯಸ್ವರ ಗುಚ್ಛಗಳೇ ಇವರು ಮಿಡಿಯ ಹೊರಟಿರುವ ರಾಗದ ಜೀವಸ್ವರಗಳಾಗಿರಬಹುದು! ಈ ಕಿರುಗವಿತೆಯನ್ನು ನೋಡಿ.
“ತಥಾಗತನನ್ನು ಅರಸಿ ಹೊರಟಿದ್ದೇನೆ
ನಿರಾಕರಿಸಲಿಕ್ಕ?
ನೆರಳಿಗಂಟಿದ ದೇಹ
ಚಲಿಸುತ್ತೆ.
ನೆರಳ ನೆರಳಾಗಿ
ಸತ್ಯ ನಿಜಕ್ಕೂ ಸತ್ಯವ?!”
ಕವಿ, ತಥಾಗತ (ಬುದ್ಧ)ನನ್ನು ಅರಸಿ ಹೊರಟಿದ್ದಾನೆ! ತಥಾಗತನೂ ಹೀಗೆ ಯಾವುದನ್ನೋ ಅರಸಿ ಹೊರಟವನೇ. ಹಾಗೆ ಈತ ಹೊರಟದ್ದೂ ತಥಾಗತನ ಒಂದು ನೆರಳಿನಂತೆ ಆಗಿಬಿಟ್ಟಿತು! ಅಲ್ಲದೆ ಬುದ್ಧನು ಎಲ್ಲವನ್ನೂ ನಿರಾಕರಣೆ ಮಾಡಿದವನಲ್ಲವೆ? ತಾನೂ ನಿರಾಕರಣೆಯನ್ನೇ ಅರಸಿ ಹೊರಟಂತೆ ಆಯಿತೆ? ಅರಸುವಿಕೆಯಲ್ಲಿಯೇ ನಿರಾಕರಣೆಯ ಒಂದು ಗುಣವೂ ಅಡಗಿದೆಯೆ? ಅಂದರೆ ಏನನ್ನೋ ಅರಸುವಿಕೆಯಲ್ಲಿ ಇರುವುದರ ನಿರಾಕರಣೆಯು ಅಡಗಿರುವುದಿಲ್ಲವೆ? ಅಥವಾ ತಥಾಗತನೇ ಸಿಕ್ಕಿದರೂ ಅದು ನಿರಾಕರಣೆಯ ತತ್ತ್ವವೇ ಸಿಕ್ಕಂತಲ್ಲವೇ? ನಿರಾಕರಣೆಯು “ಸಿಗುವುದು” ಎಂದರೇನರ್ಥ? ಅಲ್ಲಿಯೇ ಒಂದು ವಿರೋಧಾಭಾಸವಿಲ್ಲವೆ? ಒಟ್ಟಿನಲ್ಲಿ ತಾನು ತಥಾಗತನ ನೆರಳಿಗೆ ಅಂಟಿಕೊಂಡಂತಾಯಿತೆ? ದೇಹಕ್ಕಂಟಿದ ನೆರಳು ಎಂದಿರಬೇಕಾಗಿದ್ದ ಮಾತು ನೆರಳಿಗಂಟಿದ ದೇಹ ಎಂದಾಗಿಬಿಟ್ಟಿತೆ? ಆಗಿ; ನೆರಳ ನೆರಳಾಗಿಹೋಯಿತೆ? ಈ ನೆರಳಿಗೆ ಸತ್ಯವೇ ತಿಳಿಯಿತು ಎಂದಿಟ್ಟುಕೊಳ್ಳಿ; ಅದು, ಸತ್ಯವೆಂದು ತಿಳಿಯುವುದು ಹೇಗೆ? “ಸತ್ಯ ನಿಜಕ್ಕೂ ಸತ್ಯವ?” ಎನ್ನುವುದು ಪದ್ಯದ ಕೊನೆಯ ಸಾಲು. ಸತ್ಯವನ್ನು ಸತ್ಯ ಎಂದು ತಿಳಿಯುವುದಕ್ಕೆ ಇನ್ನೊಂದು ‘ಪದ’ ಬೇಕು. “ನಿಜ” ಎನ್ನುವುದು ಆ ಇನ್ನೊಂದು ಪದ! “ಸತ್ಯ ನಿಜಕ್ಕೂ ಸತ್ಯವ”- ಎಂದು ಕೇಳಿದಾಗ ‘ನಿಜಕ್ಕೂ’ ಎಂಬ ಪದದ ಒತ್ತಾಸೆಯಿಂದಾಗಿ ಒಂದು ಭರವಸೆಯ ಧ್ವನಿ ಕೇಳಿಸುತ್ತದೆ. ಆದರೂ ಅದು ಬರಿಯ ಇನ್ನೊಂದು ಪದವೂ ಹೌದು; ನೆರಳಿನ ನೆರಳಿನಂತೆ. ಆದರೆ ಆ ಇನ್ನೊಂದು ಪದದಲ್ಲಿ ಸತ್ಯವೇ ಇರಬಹುದು - ಅಕ್ಕ; “ಚೆನ್ನನ ಪರಿ ಬೇರೆ” ಎಂದಾಗ ಆಗುವಂತೆ!
ಈ ಕವಿತೆಯ ಜೊತೆಗೆ “ಚರಿತ್ರೆ” ಎಂಬ ಕವಿತೆಯ ಈ ಸಾಲುಗಳನ್ನಿಟ್ಟು ನೋಡಿ.
“ಗುಡ್ಡದ ದಾಸಯ್ಯ ಹೇಳಿದ
ಜಗತ್ತು ಎಂಬೋದು ಬರೀ ಭಾಷೆ ಕಾಣ್ ಮಗ
ಭಾಷೇನ ರಚಿಸಿದ್ದು ನಾನೇ ಅಂತ ನೀ ಅಂದ್ಕೋತೀಯ
ನಿನ್ನನ್ನ ರಚಿಸಿದ್ದು ತಾನೇ ಅಂತ ಭಾಷೆ ಅಂದ್ಕೊಳ್ಳುತ್ತೆ
ನಿನ್ನ ಕಾಗದದ ಕ್ಯಾಮರ ಒಂದು ಪದ
ಇನ್ನು ನಿನ್ನ ಪ್ರಶ್ನೆ
ಭಾಷೆಯ ಸಿದ್ಧ ತಾರ್ಕಿಕ ನಿಯಮಗಳ ಮುಖಾಂತರ ಉದ್ಭವಿಸಿದ
ಮತ್ತೊಂದು ಪದ
ನಂಬೋದು ಹೇಗೆ?”
ಈ ಸಾಲುಗಳನ್ನು ಓದುತ್ತಿದ್ದಂತೆ ಇದು ಇನ್ನೊಬ್ಬ ದಾಸಯ್ಯನೇ ಹೇಳಿದ “ನಾಮದ ಬಲ” ಎಂಬ ನುಡಿಗಟ್ಟನು ನೆನಪಿಸಿತು. ನಿನ್ನ ನಾಮದ ಬಲದಿಂದ ನಿನ್ನ ಹಂಗನ್ನೇ ಮೀರುವುದು ಸಾಧ್ಯ ಎಂದು ತನ್ನ ಇಷ್ಟದೈವದೊಡನೆ ಆಡುವ ಸಾಲು ಅದು. ಅರ್ಥವನ್ನು ಮೀರಿ ನಾಮದ (= ಭಾಷೆಯ) ಜೀವಂತಿಕೆಯನ್ನು ಸೂಚಿಸುವ ಸಾಲು ಅದು. ಪಾರ್ವತೀಪರಮೇಶ್ವರರು ವಾಗರ್ಥಗಳಂತೆ ಬೆರೆತಿದ್ದಾರೆ ಎಂದು ಕಾಳಿದಾಸನು ಸ್ತುತಿಸುವಾಗಲೂ ಈ “ನಾಮದಬಲ” ಇನ್ನೊಂದು ರೀತಿಯಲ್ಲಿ ಕೇಳಿಸುತ್ತದೆ. ಆದರೆ ಇಂಥ ನಂಬಿಕೆ ಈ ಕಾಲದ ಈ ಕವಿಗೆ ಇಲ್ಲವಾಗಿದೆ. ಕವಿಗೆ ತಾನು ಸೃಷ್ಟಿಸಿದ ಪಾತ್ರಗಳ ಜೊತೆ-ತನ್ನದೇ ಭಾಷೆಯ ಜೊತೆ-ತನ್ನ ನಾಮದ ಬಲದ ಜೊತೆ-ನಿರಂತರ ಸಂಘರ್ಷವಿದೆ. ಸಂಕಲನದುದ್ದಕ್ಕೆ ಇದು ಕಾಣಿಸುತ್ತದೆ. ‘ಸಂಗತಿ’ಗಳ ಜೊತೆ ‘ಅಸಂಗತಿ’-`ವಿಸಂಗತಿ’ಗಳು ತಳಕು ಹಾಕಿಕೊಂಡಿರುವುದು ಕವಿಗೆ ಕಾಣಿಸುತ್ತದೆ. ಇವನ್ನು ‘ನಾಮದ ಬಲ’ ಎಂದು ನಂಬುವುದು ಹೇಗೆ? ಸಂಕಲನದುದ್ದಕ್ಕೆ ಈ ದ್ವಂದ್ವವಿದೆ.

-ಲಕ್ಷ್ಮೀಶ ತೋಳ್ಪಾಡಿ
(ಮುನ್ನುಡಿಯಿಂದ)