ಮೃಗಶಿರ

Share
  • Ships within 3 days
₹ 135
Description

ಲೇಖಕರು: ಶ್ರೀಧರ ಬಳಗಾರ
ಬೆಲೆ: 150/- ಪುಟಗಳು: 152
ರಿಯಾಯಿತಿ: 10%
ಪ್ರಕಾಶನ: ಅಭಿನವ, ಬೆಂಗಳೂರು
...................
ಜೇಡರ ದಾಸಿಮಯ್ಯನ ವಚನವೊಂದನ್ನು ‘ಮೃಗಶಿರ’ ನೆನಪಿಸುತ್ತದೆ.
‘ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿದ; ನೀನೆನ್ನ ಜರಿದೊಮ್ಮೆ ನುಡಿಯದಿರಾ
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ ರಾಮನಾಥಾ’
ಒಡಲುಗೊಂಡ ಮನುಷ್ಯ ಮಾತ್ರರ ಹಸಿವು ಮತ್ತು ಹುಸಿಗಳನ್ನೇ ಈ ಕಾದಂಬರಿ ಕತೆ ಮಾಡಿ ಹೇಳುತ್ತದೆ.
ಕಾದಂಬರಿಯ ಒಡಲೇ ಆಗಿರುವ ಅನಸೂಯ ಅಥವಾ ಅವಳ ಪೈಕಿಯವರೆಲ್ಲ ಕರೆಯುವ ಹಾಗೆ ಅಂತೆ/ಅಂತತ್ತೆ/ಅಂತಕ್ಕ ಮತ್ತು ಅವಳನ್ನು ಲಗ್ನವಾಗಿ ಗಂಡ ಎನ್ನಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರ ಸುಬ್ರಾಯಪ್ಪನವರ ನಡುವೆ ಚೂರೂ ಅನ್ಯೋನ್ಯವಿಲ್ಲ.
ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದಾಗಲೇ, ಅಂತಕ್ಕ ಅವಳ ಇಚ್ಛೆಯನ್ನು ಮೀರಿದ ‘ಶರೀರ ಧರ್ಮಕ್ಕೆ ಅನುಸಾರವಾಗಿ’ ಗರ್ಭವತಿಯಾಗುತ್ತಾಳೆ. ಇದರಿಂದ ಅವಳ ಬಗ್ಗೆ ಅವಳ ಅತ್ತೆ ಮಾವಂದಿರ ಮನಸ್ಸು ಮುರಿದರೂ, ಮನೆಯ ಒಟ್ಟಂದ ಮುರಿಯುವುದಿಲ್ಲ. ಜೈಲಿನಿಂದ ಬಿಡುಗಡೆಯಾಗಿ ಸುಬ್ರಾಯಪ್ಪ ಮನೆಗೆ ಮರಳಿದಾಗಲೂ ಈ ಸಹಬಾಳ್ವೆ ಎಂದಿನಂತೆ ಮುಂದುವರಿಯುತ್ತದೆ. ಮಾತಿಲ್ಲದ ಮನದಲ್ಲಿ ಅವರೆಲ್ಲ ಒಟ್ಟಿಗೇ ಒಂದೇ ಮಾಡಿನಡಿಯಲ್ಲಿ ತಮ್ಮ ತೋರಿಕೆಯ ಸಂಸಾರ ನಡೆಸುತ್ತಾರೆ. ಜೀವ ಹಿಂಡುವ ನೋವಿನಲ್ಲೂ ಸಹ ಅವರು ಎಲ್ಲರೂ ತಮ್ಮ ವ್ಯಕ್ತಿತ್ವದ ಘನತೆಯನ್ನು ಮುಡಿಪಾಗಿ ಉಳಿಸಿಕೊಳ್ಳುತ್ತಾರೆ.
ಅಂತಕ್ಕನ ವಿವಾಹ ಬಾಹಿರ ಗರ್ಭಕ್ಕೆ ಕಾರಣನಾದ ಪುಟ್ಟಣ್ಣ ಹಠಾತ್ತಾನೆ ತೀರಿಕೊಂಡಾಗ ಅವನ ಪತ್ನಿ ತಂಗು ಅನಾಥೆಯಾಗುತ್ತಾಳೆ. ದಿಕ್ಕಿಲ್ಲದ ವಿಧವೆಗೆ, ತನ್ನ ಎಲ್ಲ ಕಷ್ಟ, ಯಾತನೆಗಳ ನಡುವೆಯೂ ಆಶ್ರಯ ನೀಡಿ ರಕ್ಷಿಸಿದವಳು ಅಂತಕ್ಕ. ಪುಟ್ಟಣ್ಣನ ಸಾವು ಆಕಸ್ಮಿಕವೆ? ಕೊಲೆಯೆ? ಕೊಲೆಯೇ ಹೌದಾದರೆ ಅದನ್ನು ಯಾರು ಮಾಡಿದ್ದು? ಯಾಕಾಗಿ? ಅಂತಕ್ಕ ಗರ್ಭವತಿಯಾದದ್ದು ಒಂದು ಪ್ರಮಾದ ನಿಜ; ಆದರೆ ಅದು ಅಪರಾಧವೆ? ಅಪರಾಧವೇ ಆದರೆ ಶಿಕ್ಷೆ ಆಗಬೇಕಾದ್ದು ಯಾರಿಗೆ? ಶಿಕ್ಷೆ ಅನುಭವಿಸಿದವರು ಯಾರು? ಯಾವುದು ಸತ್ಯ? ನ್ಯಾಯ ಯಾರ ಕಡೆಗಿದೆ? ಕಾದಂಬರಿಯಲ್ಲಿ ಈ ಪ್ರಶ್ನೆಗಳು ಮಾತ್ರ ಇವೆ. ಅವಕ್ಕೆ ಉತ್ತರ ರೂಪದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ಪಾತ್ರಗಳು ನೀಡಿದ ತಮ್ಮ ತಮ್ಮ ವಕ್ತವ್ಯಗಳು ಮಾತ್ರ ಇವೆ.
‘ನನ್ನನ್ನು ಜರಿದೊಮ್ಮೆ ನುಡಿಯದಿರು; ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ’ ಎಂದು ಅಂತಕ್ಕ ತನ್ನ ದೈವಕ್ಕೂ, ತನ್ನ ಸುತ್ತಲಿನ ಸಮಾಜಕ್ಕೂ ಸವಾಲು ಹಾಕುತ್ತಿದ್ದಾಳೆ. ಅವಳ ದೈವ ಯಾವತ್ತೊ ಅವಳ ಕೈಬಿಟ್ಟಿದೆ. ಅವಳ ಸವಾಲನ್ನು ಉತ್ತರಿಸುವವರು ಯಾರು? ಚರಿತ್ರೆ ಈ ಸವಾಲನ್ನು ಎದುರಿಸುವುದಿಲ್ಲ. ಎಲ್ಲ ಚರಿತ್ರೆಯೂ ಗೆದ್ದವರು ಬರೆಯುವ ಚರಿತ್ರೆಯಾಗಿರುವುದರಿಂದ ಅಲ್ಲಿ ಗೆದ್ದವರದ್ದೇ ನ್ಯಾಯ; ಗೆಲ್ಲುವುದೇ ಸತ್ಯ.
ಆದರೆ ಕಾದಂಬರಿ ಚರಿತ್ರೆಯಲ್ಲ. ಅದು ಹೇಳಿ ಕೇಳಿ ಸೋತವರ ಕತೆ; ಅದರಲ್ಲಿರುವುದು ಪ್ರಶ್ನೆಗಳು ಮಾತ್ರ.
ಮೃಗಶಿರ ಒಂದು ನಕ್ಷತ್ರದ ಹೆಸರು. ಕಾದಂಬರಿಯಲ್ಲಿ ಅದು ಕಾಲುಗಳು ಕೆಸರಲ್ಲಿ ಹೂತಿದ್ದರೂ ಮನಸ್ಸು ಮಾತ್ರ ಆಕಾಶದಲ್ಲಿ ವಿಹರಿಸುವ, ಇಬ್ಬಂದಿತನಕ್ಕೆ ಸಂಕೇತವಾಗುತ್ತದೆ.
- ಜಿ. ರಾಜಶೇಖರ
(ಬೆನ್ನುಡಿ)